Thursday, April 16, 2009

ನಿನ್ನ ಬಿಟ್ಟು ನಿಸರ್ಗವನ್ನು ಪ್ರೀತಿಸುತ್ತಿದ್ದರೆ..?!!

ಗೆಳತೀ,
ಜಗತ್ತು ವಿಶಾಲ. ಬದುಕು ವಿಶಾಲ. ನಿನ್ನ ಹೃದಯನೂ ಅಷ್ಟೇ ವಿಶಾಲ ಅಂದುಕೊಂಡ ಮುಗ್ಧ ಮನಸ್ಸು ನನ್ನದು. ನಿನ್ನ ಪ್ರೀತಿಯ ತೀರದಲ್ಲಿ ಲಗೋರಿಯಾಟ ಆಡುತ್ತಿದ್ದಾಗ ಧೊಪ್ಪನೆ ದಡಕ್ಕಪ್ಪಳಿಸುತ್ತಿದ್ದ ಆ ಅಲೆಗಳೇಕೋ ಅಲೆಯೆನಿಸಲಿಲ್ಲ, ಪ್ರೀತಿಯ ಸೆಲೆಯೇನೋ ಅಂದುಕೊಂಡೆ. ನೀ ಗೀಚಿದ ನಾಲ್ಕಕ್ಷರಕ್ಕೆ ಜಗತ್ತನ್ನು ಮರೆಸುವ ಶಕ್ತಿ ಇದೆ, ನಿನ್ನ ಮಡಿಲು ನನ್ನ ಖುಷಿ-ದುಃಖಗಳಿಗೆ ಅಮ್ಮನಾಸರೆ ಆಗುತ್ತೆ ಅಂದುಕೊಂಡಿದ್ದೆ. ಗೆಳತೀ, ನೀ ಹಾಗಾಗಲಿಲ್ಲ ಬಿಡು..!

ನೀನಿತ್ತ ಭಾಷೆಗೆ ಸುಗ್ಗಿಯ ಸಂಭ್ರಮವಿತ್ತು. ನಾಳಿನ ಚಿಂತೆಗಳಿಗೆ ಅವಕಾಶವೇ ಇರಲಿಲ್ಲ ಗೆಳತೀ. ನಿನ್ನ ನಗು ಮತ್ತು ಕಣ್ಣುಗಳನ್ನು ನಾ ತುಂಬಾ ಪ್ರೀತಿಸುವೆ, ಖುಷಿಯಲ್ಲಿದ್ದಾಗ ಬೆಳಕು ನೀಡೆಂದು ಪದೇ ಪದೇ ದುಂಬಾಬು ಬೀಳುತ್ತಿದ್ದ ನಿನಗೆ ನಾ ನೀಡಿದ ಬೆಳಕು ಅದೇಕೆ ಅಮಾವಾಸ್ಯೆಯ ಕತ್ತಲೆಯೆನಿಸಿತು? ಅದೇಕೇ ಹುಣ್ಣಿಮೆಯಾಗಲಿಲ್ಲ? ಅದೇಕೇ ನಾ ನಿನ್ನ ಪಾಲಿಗೆ ಬೆಳದಿಂಗಳ ಚಂದಿರನೆನಿಸಲಿಲ್ಲ?! ಅದೇ ನೀನಿಲ್ಲದ ಬದುಕಿನಲ್ಲಿ ಕಪ್ಪನೆಯ ಆಕಾಶದಲ್ಲಿ ಮಿನುಗುವ ನಕ್ಷತ್ರಗಳನ್ನು ಎಣಿಸುತ್ತಾ ಇದೀಗ ಮತ್ತೆ ಮತ್ತೆ ಪ್ರಶ್ನೆಗಳನ್ನು ನನಗೇ ನಾ ಕೇಳಿಕೊಳ್ಳುತ್ತಿದ್ದೇನೆ. "ಮನುಷ್ಯ ಮನುಷ್ಯನಿಗೆ ಮಾಡುವ ಎಲ್ಲಾ ದ್ರೋಹಗಳೂ ಅತ್ಯಾಚಾರಗಳೇ, ನೀ ನನ್ನ ಬಿಟ್ಟು ಹೋಗಲ್ಲ ತಾನೇ? ಭಾಷೆ ಕೊಡು' ಎಂದು ಬೆಳ್ಳಂಬೆಳಿಗ್ಗೆ ಕಡಲ ತಡಿಯಲ್ಲಿ ಇಬ್ಬನಿ ಬೆಳಗನ್ನು ಸವಿಯುತ್ತಾ ನೀ ಕೇಳಿದ ಪ್ರಶ್ನೆ! ಗೆಳತೀ, ನೀ ಮಾಡಿದ ದ್ರೋಹವನ್ನು ನಾ ಏನೆಂದು ಕರೆಯಲಿ? ಅತ್ಯಾಚಾರವೇ? ದ್ರೋಹವೇ? ನಂಬಿಕೆಗೆ ಪೆಟ್ಟೇ?

ಗೆಳತೀ, ನೀ ನನಗೆ ರಾಜಬೀದಿಯಾಗು ಎನ್ನಲಿಲ್ಲ, ನನ್ನ ಪಾಲಿಗೆ ಪುಟ್ ಪಾತ್ ಆಗಿಬಿಡು ಎಂದವ ನಾನು. ನೇಸರನಾಗಿ ಬೆಳಗು ಎಂದಿಲ್ಲ, ಪುಟ್ಟ ನಕ್ಷತ್ರವಾಗಿ ನನ್ನ ಬದುಕಿನಲ್ಲಿ ಬೆಳಗುತ್ತಿರು ಎಂದಿದ್ದೆ. ನಾ ಹೆಣೆದ ಪುಟ್ಟ ಕನಸುಗಳು ಅದೇಕೋ ಬಲಿತು ಹಣ್ಣಾಗುವ ಮೊದಲೇ...?! ಇರುಳ ಕತ್ತಲಿನಲ್ಲಿ ಪುಟ್ಟ ಹಣತೆ ಹಚ್ಚಿಟ್ಟು..ಆತ್ಮದೊಂದಿಗೆ ಮಾತನಾಡಲಷ್ಟೇ ನಾ ಕಲಿತಿದ್ದೆ ಗೆಳತೀ, ದೇಹದೊಂದಿಗಲ್ಲ! ಮನದ ಕನ್ನಡಿಯಲ್ಲಿ ಮುರಿದ ಮನಸ್ಸಿನ ಜಾತ್ರೆಯಲ್ಲಿ ಭಾವವಿಹೀನ ಬಿಂಬಗಳನ್ನು ಕಾಣುತ್ತ ಕುಳಿತ ನನಗೆ ನೀನಿತ್ತ ಭಾಷೆ ಮತ್ತೆ ಮತ್ತೆ ನೆನಪಾಗುತ್ತಿದ್ದೆ. ನೆನಪಿಡು, ಮನದ ಕದ ನಾ ಬಡಿಯಲಿಲ್ಲ ಗೆಳತೀ...ನೀನೇ ಕೈಯಾರೆ ಬಡಿದಿದ್ದೀಯಾ...ನೋಡು ಈಗ ನಿನ್ನ ಕೈಯಾರೆ ಮುಚ್ಚಿಬಿಡುತ್ತಿದ್ದೀಯಾ! "ಎಲ್ಲಾ ಸಮಸ್ಯೆಗಳಿಗೂ ನಮ್ಮ ಸೋಲಿಸಲು ದೈರ್ಯವಿರುವುದಿಲ್ಲ" ಎಂದು ನನ್ನ ಬದುಕಿಗೆ ಭರವಸೆ ತುಂಬಿದ ನೀ ಮಬ್ಬಿಗೆ ಬೆಳಕಾಗಿ, ಎಳೆಬಿಸಿಲಿಗೆ ಬಣ್ಣದ ರಂಗೋಲಿಯಾಗಿ ನೀ ಬರುವ ಕನಸು ಕಂಡಿದ್ದೆ. ಯಾಕೋ ಸುಗ್ಗಿಯ ಸಂಭ್ರಮ ಕೊನೆ ತನಕ ಉಳಿಯಲಿಲ್ಲ. ಕನಿಷ್ಠ ಪಕ್ಷ ನಿನ್ಮ ಪ್ರೇಮ ಬಿಡು, ಜೀವನ ಪ್ರೀತಿಯನ್ನೂ ನೀ ಉಳಿಸಿಕೊಂಡಿಲ್ಲವಲ್ಲಾ ಎನ್ನುವ ಕೊರಗು ನನ್ನದು. ಕಣ್ಣಲ್ಲಿ ನೀರು ತುಂಬಿಕೊಂಡು, ಮುಖದಲ್ಲಿ ಕೃತಕ ನಗುವನ್ನು ಹೊರಸೂಸುವ ಸರದಿ ನನ್ನದು. ಥೂ! ಎಂಥ ದುರಂತ...! ಪ್ರೀತಿಗಾಗಿ ಹಪಹಪಿಕೆ ಸರಿಯಲ್ಲ...ಕಣ್ಣೀರ ಬೆಲೆ ಅರ್ಥವಾಗದವರ ಎದುರು ಕಣ್ಣೀರು ಹಾಕೋದು ತರವಲ್ಲ..ಆದರೆ ಎದೆಯಾಳದಿಂದ ಹೊರಹೊಮ್ಮುವ ದುಃಖದ ಬೇಗೆ, ಕಂಗಳಿಂದ ಹನಿ ಹನಿಯಾಗಿ ಸುರಿಯುತ್ತಿದೆ ನೋಡು...! ಗೆಳತೀ..ಒಂದೇ ಒಂದು ಬಾರಿ ನಿನ್ನ ಆತ್ಮದೊಡನೆ ಕೇಳಿಬಿಡು...ನಾನೂ ಮಾತಿಗಿಳಿದಿದ್ದು ನಿನ್ನ ಆತ್ಮದ ಜೊತೆ ಮಾತ್ರ!

ನನ್ನೊಂದಿಗೆ ಮಾತನಾಡುವ, ನನ್ನೊಂದಿಗೆ ಒಡನಾಡುವ, ನನ್ನ ಮೌನ-ಮಾತುಗಳನ್ನು ಹಂಚಿಕೊಳ್ಳುವ, ನನ್ನೆದೆಯಲ್ಲಿ ಪ್ರೀತಿ ಬೆಳಕು ವಿಶ್ವಾಸಗಳನ್ನು ತುಂಬುವ ಗೆಳತಿಯಾಗ್ತೀಯಾ ಅಂದುಕೊಂಡೆ. ಆದರೆ ಹಾಗಾಗಿಲ್ಲ ಬಿಡು, ಯಾಕೋ ನೆನಪಾಗುತ್ತಿದೆ, ಭೈರಪ್ಪ ಅವರ ದೂರಸರಿದರು ಕಾದಂಬರಿಯಲ್ಲಿ ಬರುವ "ಮನುಷ್ಯರನ್ನು ಪ್ರೀತಿಸುವುದಕ್ಕಿಂತ ನಿಸರ್ಗವನ್ನು ಪ್ರೀತಿಸುವುದರಲ್ಲಿ ನಿರಾಶೆಗೆ ಒಳಗಾಗುವ ಭೀತಿ ಕಡಿಮೆ" ಎಂಬ ಮಾತು. ಈವಾಗ ಇದು ನಿಜವೆನಿಸುತ್ತೆ. ಜುಳು ಜುಳು ಎಂದು ಹರಿಯೋ ನದಿ, ದಡಕ್ಕಪ್ಪಳಿಸುವ ಅಲೆ, ಪ್ರಶಾಂತ ಸಾಗರ, ಸಕಲ ಜೀವಕೋಟಿಗಳಿಗೂ ಆಸರೆ ನೀಡಿದ ಭೂಮಿ, ಸುರಿಯುವ ಮಳೆ, ಬೀಸುವ ಗಾಳಿ, ಮೌನವಾಗಿ ಬಿದ್ದಿರುವ ಕಲ್ಲು, ಹಸುರು ಮರಗಿಡಗಳು, ಚಿಲಿಪಿಲಿ ಕಲರವಗುಟ್ಟುವ ಹಕ್ಕಿಗಳು, ನೀಲ ಆಕಾಶ, ಚಲಿಸುವ ಮೋಡಗಳು, ಮನಕ್ಕೆ ಖುಷಿಕೊಡುವ ಹೂವುಗಳು...ಇವುಗಳನ್ನು ನಿನಗಿಂತ ಹೆಚ್ಚು ಪ್ರೀತಿಸ್ತಾ ಇದ್ರೆ ಬಹುಶಃ ನನ್ ಕಣ್ಣಲ್ಲಿ ಹನಿಬಿಂದುವಿಗೂ ಅವಕಾಶ ಇರಲಿಲ್ಲ ಎನಿಸುತ್ತೆ ಗೆಳತೀ!
ಇಂತೀ,
-ಗೆಳೆಯನಾಗಿದ್ದವ!


(ಈ ಪತ್ರ ಬರೆದಿದ್ದು ದಿನಾಂಕ 17.04.2009 ರಂದು. ಅಂದೇ ರಾತ್ರಿ ಲಗೋರಿಯಾಟದ ರಾಜೇಶ್ (http://manadapisumaathu.blogspot.com/) ಇದಕ್ಕೆ ಪ್ರತ್ಯುತ್ತರವಾಗಿ ತುಂಬಾ ಸುಂದರವಾದ ಪ್ರೇಮಪತ್ರ ಬರೆದಿದ್ದಾರೆ. ಅದೂ ಹುಡುಗಿಯಾಗಿ...! ಇದು ನಮ್ಮಿಬ್ಬರ ಬರಹದ ಸಮರ ಅಲ್ಲ...ಅವರಿಗೆ ನಾನು ಹುಡುಗನಾಗಿ ಬರೆದ ಪತ್ರ ಓದಿದ ಮೇಲೆ ಹುಡುಗಿಯಾಗಿ, ಹುಡುಗಿಯ ಮನದ ತುಮುಲಗಳನ್ನು ಕಲ್ಪಿಸಿಕೊಂಡು ಭಾವನೆಗಳನ್ನು ಅಕ್ಷರರೂಪಕ್ಕೆ ಇಳಿಸಿದ್ದಾರೆ. ನೀವೂ ಓದಿ. ರಾಜೇಶ್ ತುಂಬಾ ಚೆನ್ನಾಗಿ ಬರೆದಿದ್ದಕ್ಕೆ ಧನ್ಯವಾದಗಳು)

24 comments:

Shankar Prasad ಶಂಕರ ಪ್ರಸಾದ said...

ಯಮ್ಮಾ, ಪ್ರೇಮ ಪತ್ರ..ಸಖತ್ತಾಗಿ ಇದೆ.
ಆದ್ರೆ ಇದನ್ನ ಅರ್ಥ ಮಾಡ್ಕೋಳೋಕ್ಕೆ ಆ "ಗೆಳತಿ"ಗೆ ಆಗುತ್ತಾ?
ಅದ್ಸರಿ, ಇಲ್ಲಿ ಗೆಳೆಯ ಯಾರು? ಗೆಳತಿ ಯಾರು ?
ಕಟ್ಟೆ ಶಂಕ್ರ

PARAANJAPE K.N. said...

ಧರಿತ್ರಿ,
ಪ್ರೇಮಪತ್ರ ಬರೆದುಕೊಡುವ೦ತೆ ನನ್ನಲ್ಲಿ ಒಬ್ಬ ಕೇಳಿಕೊ೦ಡು ಬ೦ದಿದ್ದ, ಅವನಿಗೆ ನಿನ್ನ ವಿಳಾಸ ಕೊಡುವುದು ಒಳಿತೆ೦ದು ಕಾಣುತ್ತದೆ. ಬಹಳ ಚೆನ್ನಾಗಿದೆ ಪ್ರೇಮ ಪತ್ರ. ಓದಿ ಅರ್ಥೈಸಿಕೊಳ್ಳಬೇಕಾದರೆ ಆ ಪ್ರೇಮಿಕೆ ಬಹಳ ಅನುಭವವುಳ್ಳವಳಾಗಿರಬೇಕು. ಇದು ನಿನ್ನ ಸ್ವಂತ ಅನುಭವದಿ೦ದ ಬರೆದ ಪ್ರೇಮಪತ್ರದ೦ತಿದೆ. ಮುಂದುವರಿಸು.

ಗಿರಿ said...

ಧರಿತ್ರಿಯವರೇ,

"ಆ ಅಲೆಗಳೇಕೋ ಅಲೆಯೆನಿಸಲಿಲ್ಲ, ಪ್ರೀತಿಯ ಸೆಲೆಯೇನೋ ಅಂದುಕೊಂಡೆ. ನೀ ಗೀಚಿದ ನಾಲ್ಕಕ್ಷರಕ್ಕೆ ಜಗತ್ತನ್ನು ಮರೆಸುವ ಶಕ್ತಿ ಇದೆ, ನಿನ್ನ ಮಡಿಲು ನನ್ನ ಖುಷಿ-ದುಃಖಗಳಿಗೆ ಅಮ್ಮನಾಸರೆ ಆಗುತ್ತೆ ಅಂದುಕೊಂಡಿದ್ದೆ"
"ನೀನಿತ್ತ ಭಾಷೆಗೆ ಸುಗ್ಗಿಯ ಸಂಭ್ರಮವಿತ್ತು. ನಾಳಿನ ಚಿಂತೆಗಳಿಗೆ ಅವಕಾಶವೇ ಇರಲಿಲ್ಲ ಗೆಳತೀ. ನಿನ್ನ ನಗು ಮತ್ತು ಕಣ್ಣುಗಳನ್ನು ನಾ ತುಂಬಾ ಪ್ರೀತಿಸುವೆ, ಖುಷಿಯಲ್ಲಿದ್ದಾಗ ಬೆಳಕು ನೀಡೆಂದು ಪದೇ ಪದೇ ದುಂಬಾಬು ಬೀಳುತ್ತಿದ್ದ ನಿನಗೆ ನಾ ನೀಡಿದ ಬೆಳಕು ಅದೇಕೆ ಅಮಾವಾಸ್ಯೆಯ ಕತ್ತಲೆಯೆನಿಸಿತು?"

ವಾವ್..., ಬಹುಶ: ಪ್ರೇಮಿಗಿಂತ ಭಗ್ನಪ್ರೇಮಿಯೇ ತುಂಬಾ ಚೆನ್ನಾಗಿ ಬರೆಯಬಹುದು ಅನ್ನಿಸುತ್ತೆ ಪ್ರೇಮದ ಬಗ್ಗೆ. (ಕಾಳಿದಾಸನೂ ಭಗ್ನ ಪ್ರೇಮಿಯಾಗಿದ್ದಿರಬಹುದೇ...?!)
ಅದು ಹೇಗೆ ನೀವು ಮಲ್ಲಿಗೆಯನ್ನು ನೂಲಿನಲ್ಲಿ ಪೊಣಿಸಿದಂತೆ ಅಕ್ಷರಗಳನ್ನು ಸುಂದರವಾದ ಕೂಡಿಸಿ ಆಕಾರ, ಬಣ್ಣ, ಹೊಳಪು, ಭಾವ, ತಾಳ, ರಾಗ ತುಂಬಿ ಕೊಡ್ಥೀರಿ ಧರಿತ್ರಿಯವರೇ?
ನಿಮ್ಮ ಬರಹಕ್ಕೆ ಒಂದು ಸೆಳೆತವಿದೆ... ಶುರುವಿನಿಂದ ಕೊನೆಯ ತನಕ ಓದುಗನ ಮನಸ್ಸನ್ನು ನಿಮ್ಮ ಭಾವನೆಯ ಹಾದಿಯಲ್ಲಿ ಕರೆದುಕ್ಕೊಂಡು ಹೋಗುವ ಹಿಡಿತವಿದೆ ನಿಮ್ಮಲ್ಲಿ... ಗೋಪಾಲಕರ ಗುಂಪಲ್ಲಿ ಎದ್ದು ಕಾಣುವ ಕೃಷ್ಣನಂತೆ, ಬೇರೆಲ್ಲಾ ಬ್ಲಾಗಿಗರ ನಡುವೆ ನಿಮ್ಮ ಕೃತಿಯು ಶೋಭಿಸುತ್ತಿದೆ....

ಧನ್ಯವಾದಗಳು...
-ಗಿರಿ

ಧರಿತ್ರಿ said...

@ಶಂಕ್ರಣ್ಣ...
ಬರಹ ಓದಿದ್ದಕ್ಕೆ ಧನ್ಯವಾದಗಳು. ಅಣ್ಣಯ್ಯ..ಗೆಳೆಯ/ಗೆಳತಿ ಎಲ್ಲಾ ನಾನೆಂತ ಕಲ್ಪಿಸಿಕೊಂಡು ಬರೆದಿದ್ದು. ದೂರಸರಿದರು ಕಾದಂಬರಿ ಓದುವಾಗ ಆ ಸಾಲು ಸಿಕ್ತು..ಆವಾಗ ಆ ಸಾಲಿಗೆ ಹೊಂದುವಂತೆ ಬರೆದಿದ್ದು ಪ್ರೇಮಪತ್ರ!

@ಪರಾಂಜಪೆಯಣ್ಣ...ಪ್ರೇಮಪತ್ರ ಇನ್ನೊಬ್ರ ಕೈಯಲ್ಲಿ ಬರೆಸಿ ಅದನ್ನು ಗೆಳಯನೋ/ಗೆಳತಿಗೋ ಕೊಡುವಷ್ಟು ಕೆಟ್ಟ ಬುದ್ಧಿ ಬೇರೊಂದಿಲ್ಲ. ಅವನಿಗೆ ನನ್ನ ವಿಳಾಸ ಕೊಡೋದೆಲ್ಲ ಬೇಡ..ನನ್ನ ಪತ್ರದಲ್ಲಿ ಏನಾದ್ರೂ ಏರುಪೇರಾದ್ರೆ ಅವನ ಗೆಳತಿ ಮುನಿಸಿಕೊಂಡ್ರೆ ಏನು ಮಾಡೋದು ಹೇಳಿ?!ಮತ್ತೆ ಅನುಭವವೇನೂ ಆಗಿಲ್ಲ..ಅಂತ ಅನುಭವಗಳು ಆಗ್ತಾ ಇದ್ರೆ..ಇದಕ್ಕಿಂತಲೂ ಚೆನ್ನಾಗಿ ಬರೀತಾ ಇದ್ದೆ ಅನ್ನೊದು ಮಾತ್ರ 100% ನಿಜ.

@ಗಿರಿ ನಮಸ್ತೆ..ಮೆಚ್ಚುಗೆಗೆ ಧನ್ಯವಾದಗಳು. ನಾನು ಭಗ್ನಪ್ರೇಮಿಯಾಗಿ ಪತ್ರ ಬರೆದರೆ ಚೆನ್ನಾಗಿರುತ್ತೆ ಅಂದುಕೊಂಡು ಪತ್ರ ಬರೆಯಕೆ ಶುರು ಮಾಡಿ ಒಂದು ತಿಂಗಳು ಕಳೆದಿದೆ. ತಿದ್ದಿ ತೀಡಿ ಇವತ್ತು ಪೋಸ್ಟ್ ಮಾಡಿದ್ದೇನೆ. ತುಂಬಾ ಹೊಗಳಿಬಿಟ್ಟಿದ್ದೀರಾ(ನಂಗೆ ಕೊಂಬು ಬರುತ್ತೆ). ನಿಮ್ಮೆಲ್ಲಾ ಪ್ರೋತ್ಸಾಹ ನನಗೆ ಇನ್ಬಷ್ಟು ಚೆನ್ನಾಗಿ ಬರೆಯಲು ಸ್ಫೂರ್ತಿಯಾಗಲಿ.

ಧನ್ಯವಾದಗಳು.
-ಧರಿತ್ರಿ

ಶಿವಪ್ರಕಾಶ್ said...

ತುಂಬಾ ಚನ್ನಾಗಿ ಪದಗಳನ್ನು ಪೋಣಿಸಿದ್ದಿರಿ...
ಗೆಳೆಯನಾಗಿದ್ದವನ ಸಂಕಟವನ್ನು ಚನ್ನಾಗಿ ಹೇಳಿದ್ದಿರಿ..
ಧನ್ಯವಾದಗಳು ....

shama said...

ಈ ಧರಿತ್ರಿಯ ಬೆಳಗು ಇಬ್ಬನಿಯ ನಗು ನಿಜಕ್ಕೂ ಚೆಂದ

Guruprasad said...

ಅವನು ಯಾರೋ ಗೆಳೆಯನಾಗಿದ್ದವನು ,,, ಆ ಗೆಳೆತಿಗೆ ತುಂಬ ಜಾಸ್ತಿನೆ ಹೇಳ್ಕೊಂಡ್ ಇದ್ದಾನೆ,,, ಪಾಪ ಯಾವ ಮೂಡ್ ನಲ್ಲಿ ಇದ್ದನೋ... ತುಂಬ ಸ್ಟ್ರಾಂಗ್ ಆಗಿ ಬರೆದಿದ್ದಾನೆ , ಅ ಗೆಳತಿನೆ ಅರ್ಥ ಮಾಡ್ಕೊಬೇಕು.. ಇ ಗೆಳೆಯನ್ನ ಫೀಲಿಂಗ್ಸ್ ನ...
(ಧರಿತ್ರಿ ನೀವು ಒಳ್ಳೆ ಮೂಡ್ ನಲ್ಲಿ ಇದ್ದಿರಲ್ವ) :-)

ಗುರು

ಧರಿತ್ರಿ said...

@ಶಿವಪ್ರಕಾಶ್..ಧನ್ಯವಾದಗಳು. ಬರುತ್ತಾ ಇರಿ

@ಶಮಾಕ್ಕ...ನಮಸ್ತೆ. ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ನಾ ಆಭಾರಿ.

@ಗುರು..ಹ್ಲಾಂ! ಸ್ವಲ್ಪ ಕಾಲೆಳೆದ್ರಾ? ನಾನಂತೂ ಒಳ್ಳೆ ಮೂಡ್ ನಲ್ಲಿದ್ದೆ..ಅದೂ ಭೈರಪ್ಪ ಅವರ ಕಾದಬಂರಿ ಓದುತ್ತಾ ಕೂತಿರುವಾಗ ಒಳ್ಳೆ ಸಾಲುಗಳು ಕಣ್ಣಿಗೆ ಬಿದ್ದವು. ಆವಾಗಲೇ ಆ ಸಾಲಿಗೆ ಹೊಂದುವಂತೆ ಪತ್ರ ಬರೆದಿದ್ದು. ಮತ್ತೆ ಬನ್ನಿ..

-ಧರಿತ್ರಿ

ಸುಧೇಶ್ ಶೆಟ್ಟಿ said...

ಧರಿತ್ರೀಯವ್ರೆ....

ಒ೦ದೊ೦ದು ಸಾಲುಗಳು ಮನಸಿಗೆ ನಾಟುವ೦ತೆ ಬರೆದಿದ್ದೀರಾ.... ನಿಮ್ಮ ಬರಹಗಳು ದಿನಗಳೆದ೦ತೆ ಶಕ್ತಿಯುತವಾಗುತ್ತಿವೆ. ಈ ಬರಹದಲ್ಲಿರುವ ಭಾವ ತೀವ್ರತೆ ಇಷ್ಟವಾಯಿತು...

ಹೌದು... ನಿಸರ್ಗವನ್ನು ಪ್ರೀತಿಸಿದರೆ ಎಷ್ಟು ಚೆನ್ನಾಗಿರುತ್ತಿತ್ತು.

ಬಾಲು said...

pathra heavy ide, aadre illi geleya gelathi yaru?

some times bhavanegalanna heloke aagolla, adakke aksharada roopa kottu, ponisi ondu sundara udyanavana vanne nirmisi bhavanegalanna thorpadisa bahudu.

ನೀನಿತ್ತ ಭಾಷೆಗೆ ಸುಗ್ಗಿಯ ಸಂಭ್ರಮವಿತ್ತು.... idanna helalaagadu, baredare mathra adara thooka jasti ansutte. nice letter.

shivu.k said...

ಧರಿತ್ರಿ,

ಪ್ರೇಮಪತ್ರ ತುಂಬಾ ಚೆನ್ನಾಗಿದೆ...

ಭಾವನೆಗಳ ಲೋಕದಲ್ಲಿ, ನಿರಾಸೆಯ ನಿಟ್ಟುಸಿರಿನಲ್ಲಿ ಚೆನ್ನಾಗಿ ಮೂಡಿ ಬಂದಿದೆ...

ಧನ್ಯವಾದಗಳು...

Mohan Hegade said...

ಸ್ನೇಹಿ ಚಿತ್ರ,
ಒಳ್ಳೆಯ ಪ್ರೇಮ ಕತೆ ಅಲ್ಲ ಕವಿಥೆಯಂತ ಸುಂದರ ಶಬ್ದಗಳ ಗೊಂಚಲು.
ಓದುತ್ತ ಹೋದಹಾಗೆ ಪ್ರೀತಿಸಿದವರ ಮನ ಸ್ಥಿತಿ ಬಗ್ಗೆ ವಿವರಣೆ ಅಮೋಘ.
ಪ್ರೀತಿ ಮಾಡಿದವರಿಗೆ ಗೊತ್ತು
ಅದರ ಆಳ, ಉದ್ದ ಅಗಲ,
ನಾನರಿಯೆ ಪ್ರೀತಿಯ ಗೆಳತಿಯ ಅಗಲುವಿಕೆಯನ್ನು,
ಇನ್ನೇನು ತಾನೆ ಉತ್ತರಿಸಲಿ ಚಿತ್ರ?!
ದನ್ಯಾರಿ.

PaLa said...

>>ನಿನ್ನ ಬಿಟ್ಟು ನಿಸರ್ಗವನ್ನು ಪ್ರೀತಿಸುತ್ತಿದ್ದರೆ.
ಮನುಷ್ಯರೂ ನಿಸರ್ಗದ ಒಂದು ಅಂಗ ಅಲ್ವ?

ಧರಿತ್ರಿ said...

@ಸುಧೇಶ್ ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹಾಗೇ ಹೊಗಳಿ ಅಟ್ಟಕೇರಿಸಿದ್ದಕ್ಕೆ..ಕೊಂಬು ಬರು ಎಂಕ್

@ಬಾಲು ಸರ್..ಧರಿತ್ರಿಗೆ ಸ್ವಾಗತ. ಪತ್ರ heavy ಆಗಿದಾ? ಹಹಹ..! ಪ್ರೀತಿಯಿಂದ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ.

@ಶಿವಣ್ಣ...ಪುರುಸೋತ್ತು ಮಾಡಿಕೊಂಡು ಕಮೆಂಟು ಮಾಡಿದ್ದಕ್ಕೆ ಧನ್ಯವಾದಗಳು.

@ಮೋಹನ್ ನಮಸ್ಕಾರ. ಯಪ್ಪಾ! ಪತ್ರ ಓದುತ್ತಾ, ಅದನ್ನು ಅನುಭವಿಸಿದ್ದೀರಾ..ಧನ್ಯವಾದಗಳು.

-ಧರಿತ್ರಿ

ಬಿಸಿಲ ಹನಿ said...

ಧರಿತ್ರಿಯವರೆ,
ಸುಂದರವಾದ ಪ್ರೇಮ ಪತ್ರ. ಹುಡುಗಿಯಾಗಿದ್ದುಕೊಂಡು ಪರಕಾಯ ಪ್ರವೇಶ ಮಾಡಿ ಚನ್ನಾಗಿ ಬರೆದಿದ್ದೀರಿ. ಓದುತ್ತಾ ಓದುತ್ತಾ ನನಗೆ ಇಂಗ್ಲೀಷ ಕಾದಂಬರಿ "Love in Times of Cholera" ಜ್ಞಾಪಕಕ್ಕೆ ಬಂತು. ಅದರ ಛಾಯೆ ಇಲ್ಲಿ ದಟ್ಟವಾಗಿ ಕಾಣುತ್ತದೆ.

Ittigecement said...

ಧರಿತ್ರಿ...

ನಿನ್ನೆಯಿಂದ ಮೂರು ಸಾರಿ ಓದಿದೆ...

ಪ್ರತಿಕ್ರಿಯೆ ಬರೆಯೋಣ ಅಂತ ಹೋದಾಗ ಮತ್ತೊಮ್ಮೆ ಓದುತ್ತಿದ್ದೆ...
ನೀವು ಬರೆದ ಉತ್ತಮ ಭಾವ ಬರಹಗಳಲ್ಲಿ ಇದೊಂದು..

ಇದಕ್ಕೆ ಉತ್ತರವಾಗಿ ರಾಜೇಶ್ ಬರೆದ ಲೇಖನವೂ ಉತ್ತಮವಾಗಿದೆ...

ಉತ್ತಮ ಬರಹಕ್ಕಾಗಿ..
ರಾಜೇಶರಿಗೆ ಉತ್ತಮ ಲೇಖನದ ಸ್ಪೂರ್ತಿಕೊಟ್ಟಿದ್ದಕ್ಕೆ..
ನಮಗೆಲ್ಲ ರಸದೌತಣ ನೀಡಿದ್ದಕ್ಕೆ

ಅಭಿನಂದನೆಗಳು...

ಸಾಗರದಾಚೆಯ ಇಂಚರ said...

ಧರಿತ್ರಿ,
ನಿಮ್ಮ ಹಾಗೂ ರಾಜೇಶ್ ಇಬ್ಬರ ಪತ್ರವನ್ನು ನೋಡಿದೆ, ಎರಡರಲ್ಲೂ ಪ್ರಭುದ್ದತೆ ಎದ್ದು ಕಂಡಿತು. ಇ ರೀತಿಯ ಬರಹಗಳು ಮನಸಿಗೆ ತುಂಬಾ ಮುದ ನೀಡುತ್ತವೆ. ಪ್ರೇಮ ಪತ್ರದಲ್ಲಿ ಒಂದು ಪಿ ಎಚ್ ಡಿ ಮಾಡಿ

Anonymous said...

ಭಾವನೆಗಳು ತುಂಬಿ ತುಳುಕುತ್ತಿರುವ ಸಾಗರದಲ್ಲಿ ಮಿಂದು ಬಂದಂತೆ ಭಾಸವಾಗುತ್ತಿದೆ.... ಪತ್ರ ಚೆನ್ನಾಗಿದೆ...

ಮಲ್ಲಿಕಾರ್ಜುನ.ಡಿ.ಜಿ. said...

ಅಬ್ಬಬ್ಬಾ! ಪರಕಾಯ ಪ್ರವೇಶಮಾಡಿ ಬರೆದ ಪ್ರೇಮಪತ್ರ(ಭಗ್ನಪತ್ರ) ತುಂಬಾ ಘಾಟಿನಿಂದಿದೆ. ಚೆನ್ನಾಗಿದೆ. ಕಡೆಯಲ್ಲಿ ಬರೆದಂತೆ ನಿಸರ್ಗವನ್ನು ಪ್ರೀತಿಸಬೇಕು. ಅದು ನನ್ನ ಅನುಭವ ಕೂಡ. ನಿಸರ್ಗ ಆನಂದದಾಯಕ. ಮೋಹಕ. ಪ್ರೇರಕ.

ಧರಿತ್ರಿ said...

@ಉದಯ್ ಸರ್..ನಮಸ್ತೆ. Love in Times of Cholera" ಸಿಕ್ರೇ ಓದುತ್ತೇನೆ. ಹಾಗೇ ನಿಮ್ಮ ಬ್ಲಾಗಿನಲ್ಲಿ ಅಥವಾ ಯುವಕವಿಯಲ್ಲಿ ಈ ಪುಸ್ತಕದ ಬಗ್ಗೆ ಬರೇತೀರಾ? ನನ್ನ ಕೋರಿಕೆ ಇದು. ಮೆಚ್ಚುಗೆಗೆ ಧನ್ಯವಾದಗಳು.

@ಪ್ರಕಾಶ್ ಸರ್..ನಮಸ್ತೆ...ಮೂರು ಸಾರಿ ಯಾಕೆ? ನಿತ್ಯ ಓದುತ್ತಲೇ ಇರಿ. ಪ್ರೀತಿಯಿಂದ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

@ಗುರುಮೂರ್ತಿ ಸರ್..ಹ್ಹ್ಹ ಹ್ಹ ಪ್ರೇಮಪತ್ರದಲ್ಲಿ ಪಿಎಚ್ ಡಿ?! ಬೊಂಬಾಟ್ ಐಡಿಯಾ ಸರ್. ಪ್ರೇಮಿಸುವುದರಲ್ಲಿ ಪಿಎಚ್ ಡಿ ಮಾಡೋದಕ್ಕಿಂತ ಪ್ರೇಮಪತ್ರದಲ್ಲಿ ಪಿಎಚ್ ಡಿ ಮಾಡೋದು ಒಳ್ಳೆದು ಅಲ್ವಾ? ಸಿದ್ಧತೆ ನಡೆಸುತ್ತೇನೆ..ಆಮೇಲೆ ನನ್ನ ಹೆಸರಿನ ಮುಂದೆ ಡಾ..ಸೇರಿ ..ನನ್ನ ಪ್ರೇಮ ಪತ್ರ ಡಿಗ್ರಿನೂ ಸೇರ್ಕೊಂಡ್ರೆ ದಾಖಲೇ ನೇ !!! ಧನ್ಯವಾದಗಳು.

@ಇಂಚರ..ಮೆಚ್ಚುಗೆಗೆ ಧನ್ಯವಾದಗಳು. ಬರ್ತಾ ಇರಿ..

@ಮಲ್ಲಿಯಣ್ಣ..ಘಾಟನಿಂದ ಬರೆದರೇನೇ ,ಮನಸ್ಸಿಗೆ ನಾಟೋದು ಅಲ್ವಾ? ಅದಕ್ಕೆ ಬರೆದಿದ್ದು ಹಂಗೇ. ಧನ್ಯವಾದಗಳು ಅಣ್ಣಾವ್ರೀಗೆ.

-ಧರಿತ್ರಿ

ಮನಸು said...

ಧರಿತ್ರಿ,
ಕ್ಷಮೆಯಿರಲಿ ತಡವಾದ ಅನಿಸಿಕೆಗಳಿಗೆ..
ಮನದಾಳದಲ್ಲಿನ ಪ್ರೇಮಕ್ಕೆ ಎಂತೆಂತ ರೂಪು ಕೊಡುತ್ತೀರಿ, ನಿಜಕ್ಕೂ ಮೆಚ್ಚಬೇಕಾದ ಸಂಗತಿ.. ನೀವು ಇನ್ನು ಪ್ರೇಮದ ಅನುಭವಾಗಿಲ್ಲ ಎಂದಿದ್ದೀರಿ ಆದರು ಒಬ್ಬ ಹುಡುಗನ ಪ್ರೇಮದ ಬಗ್ಗೆ ಬರೆದಿದ್ದೀರಲ್ಲ ಭೇಷ್ ಎನ್ನಲೇಬೇಕು..
ಸಾಗಲಿ ಪಯಣ ಒಳಿತಿನೆಡೆಗೆ
ನಿಮಗೆ ಶುಭವಾಗಲಿ..

Prabhuraj Moogi said...

ಪ್ರೇಮ ಪತ್ರ ಬಹಳ ಚೆನ್ನಾಗಿದೆ, ಶಬ್ದಗಳ ಪ್ರಯೊಗ ಭಾಷೆಯ ಮೇಲಿನ ಹಿಡಿತ ಎದ್ದು ತೋರುತ್ತದೆ, ಆಧುಬಿಕ ಕಾಲದಲ್ಲಿ ಐ ಲವ್ ಯೂ ಅಂತ ಹೇಳಿ ಬಿಡುವ ತರುಣರಿಗೆ, ಇದೆಲ್ಲ ಎಲ್ಲಿ ಮಾಡಲಾದೀತು... ಕಲ್ಪನೆ ಅದ್ಭುತ...

ಮನದಾಳದಿಂದ............ said...

ನಿಮ್ಮ ಪ್ರೇಮ ಪತ್ರ ನನಗೆ ನನ್ನ ಅಂದಿನ ಪ್ರೇಯಸಿಯನ್ನು ನೆನಪಿಸಿತು. ಇಂತಹದೇ ಪತ್ರವನ್ನು ನಾನು ನಿಜ ಜೀವನದಲ್ಲಿ ಆಕೆಗೆ ಬರೆದಿದ್ದೆ. ಆದರೆ ನಿಮ್ಮಷ್ಟು ಸಾಹಿತ್ಯ ಶ್ರೀಮಂತಿಕೆಯಿಂದಲ್ಲ! ಒಂದು ವೇಳೆ ಆ ಸಮಯದಲ್ಲಿ ನಿಮ್ಮ ಎ ಪತ್ರ ಸಿಕ್ಕಿದ್ದರೆ ಇದನ್ನೇ copy ಮಾಡುತ್ತಿದ್ದೆ! ಚನ್ನಾಗಿ ಬರೆದಿದ್ದೀರಿ. keep writing.

Unknown said...

niivu barediruva prema parta tumba cannagide. kelavomme haage, pranakinta heccagi preetisidavaranna kelavu karanagaligagi kaledukollabekaguttade. adu nanna prakara preetige maduva mosavalla. manassige madikolluva mosa. yarodaneyu helikollalagade obbare oddaadi deerga kaala yocisi tegedu kolluva nirdara. adarinda preetisidavarige & tanage sahisalagada noovu anta gottiddaru adu anivaryavagibidutte ade jeevana. idakke gandu,hennu ibbaru horatagilla idu nanna abhipraya.